ಪಕ್ಷಿ, ಬಾವಲಿ, ಮತ್ತು ಸೀಲ್ ಮೀನುಗಳ ಮಲಮೂತ್ರದಿಂದಾದ ಗೊಬ್ಬರ. ಮೀನುಗಳನ್ನು ಭಕ್ಷಿಸುವ ಪೆಲಿಕನ್, ಕಾರ್ಮೊರಾಂಟ್ ಮತ್ತು ಗ್ಯಾನೆಟ್ (ಕಡಲಕೋಳಿ)ಗಳಿಂದ ಇದು ದೊರೆಯುವುದು. ಪೆರುವಿನ ಪಶ್ಚಿಮ ಕಡಲು ಪ್ರದೇಶ, ಕ್ಯಾಲಿಫೋರ್ನಿಯ ಮತ್ತು ಆಫ್ರಿಕದಲ್ಲಿ ಒಂದು ಚದರ ಮೈಲಿಗೆ 5,600,000ರ ಸಂಖ್ಯೆಯಲ್ಲಿ ಇವು ವಾಸಿಸುತ್ತವೆ. ಗ್ವಾನೋ ಗೊಬ್ಬರದಲ್ಲಿ ಶೇ.11-ಶೇ.16 ಸಾರಜನಕ, ಶೇ.8-ಶೇ.12 ರಂಜಕಾಮ್ಲ ಮತ್ತು ಶೇ.2-ಶೇ.3 ರಷ್ಟು ಪೊಟ್ಯಾಷ್ ಇದೆ. ಮಿಸ್ಸೋರಿ ಮತ್ತು ಗ್ರ್ಯಾಂಡ್ ಕ್ಯಾನ್ಯನ್ ಗುಹೆಗಳಲ್ಲಿ ಬಾವಲಿಗಳ ಗ್ವಾನೋ ಅಧಿಕ ಮೊತ್ತದಲ್ಲಿ ದೊರೆಯುತ್ತದೆ. ಸೀಲ್ ಪ್ರಾಣಿಯ ಗ್ವಾನೋ ದಕ್ಷಿಣ ಅಮೆರಿಕ ಲೋಬಾಸ್ ದ್ವೀಪಗಲ್ಲಿ ಶೇಖರವಾಗಿದೆ. ಪೆರು 1810 ರಿಂದ ಹೊರದೇಶಕ್ಕೆ ಗ್ವಾನೋ ಗೊಬ್ಬರವನ್ನು ರಫ್ತು ಮಾಡುತ್ತಿದೆ. ಅಧಿಕ ಉತ್ಪತ್ತಿಗಾಗಿ ಸರ್ಕಾರ ಕಡಲಕೋಳಿಗಳ ಬೇಟೆಯನ್ನು ನಿಷೇಧಿಸಿದೆ.	(ಜಿ.ಎಸ್.ಆರ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ